ಇಂಡಿಯಂ
ಒಂದು ಲೋಹಧಾತು. ಚಿಹ್ನೆ In ಪರಮಾಣುಸಂಖ್ಯೆ 49. ಪರಮಾಣು ತೂಕ 114.82. ವೇಲೆನ್ಸ್ ವಿನ್ಯಾಸ 5s2 5ಠಿ1. ಸಾಂದ್ರತೆ 7.28. ಕಾಠಿಣ್ಯ 1.2; ಕರಗುವ ಬಿಂದು 155o ಸೆಂ.ಗ್ರೇ; ಕುದಿಯುವ ಬಿಂದು 21o ಸೆಂ.ಗ್ರೇ; ಡಯಾಮಾಗ್ನೆಟಿಕ್ ಗುಣವಿದೆ. 1863ರಲ್ಲಿ ರೈಕ್ ಮತ್ತು ರಿಕ್ಟರ್ ಎಂಬ ಸಂಶೋಧಕರು ಜಿಂಕ್ ಬ್ಲೆಂಡು ಅದುರನ್ನು ಥಾಲಿಯಂ ಲೋಹಕ್ಕಾಗಿ ಶೋಧಿಸುತ್ತಿದ್ದಾಗ ಈ ಧಾತುವಿನ ಅಸ್ತಿತ್ವ ಬೆಳಕಿಗೆ ಬಂತು. ರೋಹಿತದರ್ಶಕದಿಂದ ಪರೀಕ್ಷಿಸಿದಾಗ ಇಂಡಿಗೋ ಬಣ್ಣದ ನೂತನ ರೇಖೆಯೊಂದು ಗೋಚರವಾಯಿತು. ಆದ್ದರಿಂದ ಇಂಡಿಯಂ ಎಂದು ಹೆಸರಾಯಿತು. ಇಂಡಿಯಂ ಪ್ರಕೃತಿಯಲ್ಲಿ ಮೊದಲ ರೂಪದಲ್ಲಿ ದೊರೆಯುವುದಿಲ್ಲ. ಭೂಮಿಯ ತೊಗಟೆಯಲ್ಲಿ (ಕ್ರಸ್ಟ್) 10-5% ಅಂಶದಷ್ಟು ಮಾತ್ರ ದೊರೆಯುತ್ತದೆ. ಸುಮಾರು 5ಂ ವಿವಿಧ ಖನಿಜಗಳಲ್ಲೂ ಅದುರುಗಳಲ್ಲೂ ಈ ಅಲ್ಪಾಂಶ ಹರಡಿ ಹೋಗಿದೆ. ಇದರ ಸಂಯುಕ್ತಗಳೂ ವಿರಳ. ಜಿಂಕ್ ಬ್ಲೆಂಡಿನ ಕೆಲವು ನಮೂನೆಗಳಲ್ಲಿ ಸ್ವಲ್ಪ ಹೆಚ್ಚಾಗಿ ದೊರೆಯುವುದು (01%). ಅದನ್ನು ಬೇರ್ಪಡಿಸುವುದು ಕಷ್ಟ. ಅದುರಿನಿಂದ ಉಳಿದೆಲ್ಲ ಲೋಹಗಳನ್ನು ಬೇರ್ಪಡಿಸಿ ಬಂದ ಇಂಡಿಯಂ ಸಲ್ಫೇಟನ್ನು ವಿದ್ಯುದ್ವಿಭಜನೆ ಮಾಡಿದರೆ ಲೋಹ ಲಭಿಸುವುದು. ಬೆಳ್ಳಿಯಂತೆ ಶುಭ್ರ, ಸೀಸಕ್ಕಿಂತ ಮೆದು. ತಗಡಾಗಿ ತಟ್ಟಬಹುದು, ತಂತಿಯಾಗಿ ಎಳೆಯಬಹುದು. ಶುಷ್ಕ ವಾತಾವರಣದಲ್ಲಿ ಸ್ಥಿರ. ಆಕ್ಸಿಜನ್ನಿನಲ್ಲಿ ತೀವ್ರವಾಗಿ ಕಾಯಿಸಿದರೆ ಸೆಸ್ಕ್ವಿ ಆಕ್ಸ್‍ಐಡ್ (Iಟಿ2ಔ3) ಉಂಟಾಗುವುದು. ಕ್ಲೋರಿನ್ ಮತ್ತು ಗಂಧಕಗಳೊಡನೆ ಸಂಯೋಗವಾಗುವುದು, ದುರ್ಬಲ ಆಮ್ಲಗಳಲ್ಲಿ ವಿಲೀನವಾಗಿ ಹೈಡ್ರೊಜನ್ ಕೊಡುವುದು. ಸೂಕ್ಷ್ಮಕಣಗಳ ರೂಪದಲ್ಲಿದ್ದರೆ ಮಾತ್ರ ಕುದಿಯುವ ನೀರು ಮತ್ತು ಕ್ಷಾರಗಳೊಡನೆ ವರ್ತಿಸುವುದು. ಸಾಮಾನ್ಯ ಸಂಯೋಗ ಶಕ್ತಿ 3. 1 ಮತ್ತು 2 ಸಂಯೋಗ ಶಕ್ತಿಯನ್ನು ಹೊಂದಿದೆ. ಅದರೆ ತ್ರಿಸಂಯೋಗ ಶಕ್ತಿಯಿಂದಾದ ಸಂಯುಕ್ತಗಳು ಸ್ಥಿರವಾಗಿರುವುವು.

	ಮುಖ್ಯ ಉಪಯೋಗ ವಿಮಾನ ರಚನೆಯಲ್ಲಿ ಬಳಸುವ ಸ್ಲೀವೆ ಬೇರಿಂಗುಗಳಲ್ಲಿ. ಕಾಲುವೆಯ ಮಾದರಿಗಳು, ಸುರಕ್ಷಾಬೆಣೆಗಳು (ಸೇಫ್ಟಿ ಪ್ಲಗ್ಸ್), ಶಸ್ತ್ರಕ್ರಿಯೆಯ ಗಾಯಪಟ್ಟಿಗಳು ಇತ್ಯಾದಿಗಳಿಗೆ ಬೇಕಾದ, ಸುಲಭವಾಗಿ ಕರಗುವ ಮಿಶ್ರ ಲೋಹಗಳ ತಯಾರಿಕೆಯಲ್ಲಿ ಮತ್ತು ನ್ಯೂಟ್ರಾನ್ ಎಣಿಕೆ ಸಾಧನಗಳಲ್ಲಿ ಇಂಡಿಯಮ್ ಉಪಯೋಗವಾಗುತ್ತಿದೆ. ಇಂಡಿಯಮ್ ಆಕ್ಸೈಡ್, ಸಲ್ಪೈಡ್, ಟೆಲುರೈಡ್, ಆರ್ಸಿನೈಡ್ ಮತ್ತು ಆಂಟಿಮೋನೈಡುಗಳೆಲ್ಲ ಅರೆಮಿದ್ಯುದ್ವಾಹಕಗಳು (ಸೆಮಿ ಕಂಡಕ್ಟರ್ಸ್). ಆದ್ದರಿಂದ ಇಂಡಿಯಮ್ ಆಂಟಿಮೊನೈಡು ಟ್ರಾನ್ಸಿಸ್ಟರುಗಳಲ್ಲಿ ಆಕ್ಸೈಡು ರೋಧಕವಾಗಿ (ರೆಸಿಸ್ಟರ್). ಸೆಲಿನೈಡು ದ್ಯುತಿ ವಿದ್ಯುದ್ವಾಹಿಯಾಗಿ (ಫೋಟೋ ಕಂಡಕ್ಟರ್) ಮತ್ತು ಸಲ್ಪೈಡು ರಂಜಕ ವಸ್ತುವಾಗಿ (ಫಾಸ್ಪರ್) ವಿನಿಯೋಗವಾಗುತ್ತಿದೆ. ಇಂಡಿಯಮ್ ಲೇಪನದಿಂದ ಕನ್ನಡಿಗಳ ಪ್ರತಿಫಲನ ಶಕ್ತಿ ಹೆಚ್ಚುವುದರಿಂದ ಮೋಟಾರು ವಾಹನಗಳ ಅಗ್ರದೀಪದಲ್ಲಿ (ಹೆಡ್ ಲೈಟ್ಸ್) ಉಪಯೋಗವಿದೆ. ಇಂಡಿಯಮ್ ಅಮಾಲ್ಗಂ ದಂತ ಚಿಕಿತ್ಸೆಯಲ್ಲಿ ಪ್ರಯೋಜನಕಾರಿ. 
(ನೋಡಿ- ಗ್ಯಾಲಿಯಮ್)									
(ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ